भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತರಂಗ

(ಭೌ) ಕಾಲ ಮತ್ತು ಸ್ಥಾನಾವಲಂಬಿ ಆದ ಒಂದು ಕ್ಷೋಭೆ. ಮಾಧ್ಯಮದ ಯಾವುದೇ ಕಣವನ್ನು ಶಾಶ್ವತವಾಗಿ ವಿಸ್ಥಾಪಿಸದೆ ಶಕ್ತಿಯನ್ನು ಒಂದು ಬಿಂದುವಿನಿಂದ ಇನ್ನೊಂದಕ್ಕೆ ವರ್ಗಾಯಿಸುವುದೇ ತರಂಗ ಲಕ್ಷಣ. ಆದ್ದರಿಂದ ಕಣಗಳು ತಮ್ಮ ಸಮತೋಲ ಸ್ಥಾನಗಳ ಸುತ್ತ ಆಂದೋಳಿಸುತ್ತವೆ. ವಿದ್ಯುತ್ಕಾಂತ ತರಂಗಗಳಲ್ಲಿ ವಿದ್ಯುತ್ ಮತ್ತು ಕಾಂತೀಯ ಕ್ಷೇತ್ರಗಳ ವ್ಯತ್ಯಯಗಳು ತರಂಗ ಕ್ಷೋಭೆಯನ್ನು ಸೂಚಿಸುತ್ತವೆ. ಅಲೆ

ತರಂಗ ಚಲನೆ

(ಭೌ) ಯಾವುದೇ ಮಾಧ್ಯಮದಲ್ಲಿ ಒಂದೆಡೆ ಉಂಟಾದ ಕದಲಿಕೆ ಇಲ್ಲವೇ ಕಂಪನ ಇನ್ನೊಂದೆಡೆಗೆ ಸ್ವತಃ ಮಾಧ್ಯಮದ ದ್ರವ್ಯ ಒಯ್ಯಲ್ಪಡದೆ ಸಾಗುವ ಪ್ರಕ್ರಿಯೆ. ಉದಾ: ಗಾಳಿ ಬೀಸಿದಾಗ ಬಾವುಟ ತೊನೆಯುವ ಪ್ರಕ್ರಿಯೆ. ಭೌತ ವಿಜ್ಞಾನದಲ್ಲಿ ತರಂಗ ಚಲನೆ ಶಕ್ತಿ ಸಾಗಣೆಯ ಒಂದು ವಿಧಾನ. ತರಂಗ ಚಲನೆಯಲ್ಲಿ ಎರಡು ಕ್ರಮಾಗತ ಬಿಂದುಗಳ ನಡುವಿನ ಅಂತರ ತರಂಗಾಂತರ (ಅಲೆಯುದ್ದ). ಮಾಧ್ಯಮದ ಯಾವುದೇ ಬಿಂದುವನ್ನು ೧ ಸೆಕೆಂಡ್‌ನಲ್ಲಿ ಹಾದುಹೋಗುವ ಅಲೆಗಳ ಸಂಖ್ಯೆ ಆವೃತ್ತಿ. ಅಲೆಯುದ್ದವನ್ನು ಕ್ರಮಿಸಲು ತರಂಗಕ್ಕೆ ಬೇಕಾದ ಕಾಲಾವಧಿ ಅದರ ಅವಧಿ, ಮಾಧ್ಯಮದ ಕಣ ಅನುಭವಿಸುವ ಗರಿಷ್ಠ ಸ್ಥಾನಾಂತರವು ತರಂಗದ ಪಾರ. ತರಂಗಾಂತರದ (ಅಂದರೆ ಅಲೆಯುದ್ದದ) ಪ್ರತೀಕ

ತರಂಗ ಫಲನ

(ಭೌ) ಕ್ವಾಂಟಮ್ ವಿಜ್ಞಾನದ ಶ್ರೋಡಿಂಗರ್ (೧೮೮೭-೧೯೬೧) ಸಮೀಕರಣದ y(x,y,z) ಫಲನ. ಇದು ಆಕಾಶದಲ್ಲಿ ಕಣವೊಂದರ ನಿರ್ದೇಶಕಗಳನ್ನು ಒಳಗೊಂಡಿರುವ ಗಣಿತೋಕ್ತಿ. ಪರಮಾಣುವಿನಲ್ಲಿ ಎಲೆಕ್ಟ್ರಾನ್- ನ್ಯೂಕ್ಲಿಯಸ್ ಸಂಬಂಧ ಕುರಿತಂತೆ ಈ ಫಲನವಿದೆ

ತರಂಗ ಬಲವಿಜ್ಞಾನ

(ಭೌ) ಕ್ವಾಂಟಮ್ ವಿಜ್ಞಾನದ ಒಂದು ಶಾಖೆ. ಇದು ಶ್ರೋಡಿಂಗರ್ ತರಂಗ ಸಮೀಕರಣವನ್ನು ಅವಲಂಬಿಸಿದೆ

ತರಂಗ ವಿಸ್ತಾರ

(ಕಂ) ಕಂಪ್ಯೂಟರ್ ವೈರ್ ಮೂಲಕ ರವಾನಿಸಬಹುದಾದ ದತ್ತಾಂಶಗಳ ಪ್ರಮಾಣ. ಇದನ್ನು ಸೆಕೆಂಡಿಗೆ ಎಷ್ಟು ಬೈಟ್ಸ್ (ದ್ವಿಮಾನ ಅಂಕಿ) ಎಂದು ಅಳೆಯಲಾಗುತ್ತದೆ. ಒಂದು ಪೂರ್ಣ ಪುಟದ ಇಂಗ್ಲಿಷ್ ಪಠ್ಯದಲ್ಲಿ ೧೬,೦೦೦ ಬೈಟ್ಸ್ ಇರುತ್ತವೆ. ತ್ವರಿತಗತಿಯ ಮೋಡೆಮ್ ಒಂದು ಪ್ರತಿ ಸೆಕೆಂಡಿನಲ್ಲಿ ೫೭,೦೦೦ ಬೈಟ್ಸ್ ರವಾನಿಸಬಲ್ಲುದು. (ತಂ) ಬ್ಯಾಂಡ್ ಅಗಲ. ರೇಡಿಯೋ ಪ್ರಸಾರದಲ್ಲಿ ಒಂದು ನಿರ್ದಿಷ್ಟ ವ್ಯಾಪ್ತಿಯ ಆವೃತಿ

ತರಂಗ ಸಂಖ್ಯೆ

(ಭೌ) ಏಕಮಾನ ಉದ್ದದಲ್ಲಿರುವ ತರಂಗಗಳ ಸಂಖ್ಯೆ. ೧//. ಇಲ್ಲಿ ತರಂಗಾಂತರ (ಅಲೆಯುದ್ದ)

ತರಂಗ ಸಮೀಕರಣ

(ಭೌ) ತರಂಗ ಬಲ ವಿಜ್ಞಾನದಲ್ಲಿಯ ಈ ಸಮೀಕರಣ ತರಂಗ ಚಲನೆಗೆ ಗಣಿತ ರೂಪ ಕೊಡುತ್ತದೆ. < page 294> ಇಲ್ಲಿ f ಎಂಬುದು x, y, z, tಗಳ ಫಲನ. .ಯು ತರಂಗ ವೇಗ. .2 ಎಂಬುದು ಲಾಪ್ಲಾಸ್ ಪರಿಕರ್ಮಿ

ತರಂಗ-ಕಣ ದ್ವೈತತ್ವ

(ಭೌ) ಬೆಳಕು ಮತ್ತಿತರ ವಿದ್ಯುತ್ಕಾಂತ ವಿಕಿರಣಗಳು ಪ್ರಸರಣಗೊಂಡಾಗ ತರಂಗವು ಚಲನೆಯಂತೆಯೂ ಪದಾರ್ಥದೊಂದಿಗೆ ಅಂತರವರ್ತಿಸಿದಾಗ ಕಣಗಳಂತೆಯೂ, ಪ್ರಕಟವಾಗುವ ವಿದ್ಯಮಾನ. ತರಂಗಗಳ ಮೂಲಕ ವ್ಯತಿಕರಣ, ವಿವರ್ತನೆ ಮತ್ತು ಧ್ರುವೀಕರಣ ಪರಿಣಾಮ ಗಳನ್ನು ವಿವರಿಸುವುದು ಸಾಧ್ಯವಾದರೆ, ಫೋಟಾನ್ ಕಣಗಳ ಮೂಲಕ ದ್ಯುತಿವಿದ್ಯುತ್, ರಾಮನ್ ಮತ್ತು ಕಾಂಪ್ಟನ್ ಪರಿಣಾಮಗಳನ್ನು ವಿವರಿಸಬಹುದು

ತರಂಗಮುಖ

(ಭೌ) ತರಂಗ ಚಲನೆಯ ಪಥದಲ್ಲಿ ಒಂದೇ ಪ್ರಾವಸ್ಥೆಯಲ್ಲಿರುವ ಆಸನ್ನ ಬಿಂದುಗಳ ಪಥ

ತರಂಗಾಂತರ

(ಭೌ) ತರಂಗದೂರ. ನೋಡಿ: ಅಲೆಯುದ್ದ

ತರಲ

(ಭೌ) ಅನಿಲ ಅಥವಾ ದ್ರವ. ಇವುಗಳ ಘಟಕಗಳು ಪರಸ್ಪರ ಬಿಗಿಯಾಗಿ ಬಂಧಿತವಾಗಿರದಿರುವುದರಿಂದ ಇವು ಹರಿಯ ಬಲ್ಲವು, ಧಾರಕದ ಆಕಾರ ತಳೆಯಬಲ್ಲವು. ಪ್ರವಾಹಿ

ತರಲೀಕರಣ

(ಭೌ) ಕಣರೂಪದ ಘನ ವಸ್ತುವಿನ ಮೂಲಕ ಅನಿಲ ಅಥವಾ ಆವಿ ಹಾಯಿಸಿ ಮಿಶ್ರಣವು ದ್ರವದಂತೆ ವರ್ತಿಸುವ ಹಾಗೆ ಮಾಡುವ ವಿಧಾನ. ಕ್ರಿಯಾಕಾರಿಗಳಲ್ಲಿ ಹೀಗೆ ಮಾಡಿದಾಗ ನಿಲಂಬಿತ ಸ್ಥಿತಿಯಲ್ಲಿರುವ ಘನ ಪದಾರ್ಥದ ಕಣಗಳು ಕುದಿಯುವ ದ್ರವದಂತಿದ್ದು ರಾಸಾಯನಿಕವಾಗಿ ಹೆಚ್ಚು ಕ್ರಿಯಾಶೀಲವಾಗುತ್ತವೆ

ತರಿ ಜಮೀನು

(ಸಾ) ನಿರಂತರವಾಗಿ ನೀರಿನ ಸರಬರಾಜಿರುವ ಕೃಷಿಭೂಮಿ

ತರ್ಕದೋಷ

(ಗ) ಯಾವುದೇ ಗಣಿತ ಪರಿಕರ್ಮದಲ್ಲಿ ವಿಧಿ ನಿಯಮಗಳನ್ನು ಅವುಗಳ ಚೌಕಟ್ಟಿನಿಂದ ಹೊರಕ್ಕೆ ಲಂಬಿಸಿದಾಗ ಎದುರಾಗುವ ವಿರೋಧಾಭಾಸ. ಉದಾ:

ತರ್ಕಮಂಡಲಗಳು

(ಕಂ) ಡಿಜಿಟಲ್ ಕಂಪ್ಯೂಟರ್ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸುವ ಮೂಲ ಸ್ವಿಚಿಂಗ್ ಮಂಡಲಗಳು ಅಥವಾ ದ್ವಾರಗಳು. ತರ್ಕಮಂಡಲವು ದ್ವಿಸಂಕೇತಕ ಪದ್ಧತಿಯನ್ನು ಬಳಸುವ ನಿರ್ಗಮ (ಔಟ್‌ಪುಟ್) ಸಂಜ್ಞೆಗಳನ್ನು ನಿವೇಶ (ಇನ್‌ಪುಟ್) ವ್ಯವಸ್ಥೆಗೆ ಅನುಗುಣವಾಗಿ ನಿಯಂತ್ರಿಸುತ್ತದೆ. ಮೂರು ಮೂಲ ತರ್ಕ ಮಂಡಲಗಳಿವು: ‘ಮತ್ತು’, ‘ಅಥವಾ’ ಹಾಗೂ ‘ಅಲ್ಲ’ (‘ಅಂಡ್’, ‘ಆರ್’ ಹಾಗೂ ‘ನಾಟ್’). ತರ್ಕ ಮಂಡಲಗಳನ್ನು ಈಗ ಸಮಾಕಲಿತ ಮಂಡಲಗಳಲ್ಲಿ (ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳಲ್ಲಿ ) ಮೈಗೂಡಿಸಲಾಗಿದೆ

ತರ್ಕಶಾಸ್ತ್ರ

(ಸಾ) ೧. ವಿಚಾರ, ವಾದ, ಸಮರ್ಥನ, ನಿರ್ಣಯ ಇತ್ಯಾದಿಗಳ ವಿಧಾನ ಸ್ವರೂಪಗಳನ್ನು ವಿವೇಚಿಸಿ ವಿವರಿಸುವ ಶಾಸ್ತ್ರ. ೨. ಕಂಪ್ಯೂಟರ್‌ನಲ್ಲಿ ಅಥವಾ ಎಲೆಕ್ಟ್ರಾನಿಕ್ ಸಾಧನದಲ್ಲಿ ನಿರ್ದಿಷ್ಟ ಕಾರ್ಯನಿರ್ವಹಿಸಲು ಏರ್ಪಾಡಿಸಿದ ವ್ಯವಸ್ಥೆ ಅಥವಾ ವ್ಯವಸ್ಥೆಯ ಹಿಂದಿರುವ ತತ್ವಗಳು

ತಲಪೀನ ಮಸೂರ

(ಭೌ) ಒಂದು ಮೈ ಸಮತಲವೂ ಇನ್ನೊಂದು ಮೈ ಉಬ್ಬಾಗಿಯೂ ಇರುವ ಮಸೂರ. ಸಪಾಟಪೀನ

ತಲೆ

(ವೈ) ಮಿದುಳನ್ನೂ, ಕಣ್ಣು , ಕಿವಿ, ಮೂಗು ಹಾಗೂ ನಾಲಗೆಗಳನ್ನೂ ಒಳಗೊಂಡಿರುವ ಪ್ರಾಣಿ ಶರೀರದ ಮೇಲು ಅಥವಾ ಮುಂಭಾಗ. ಬುದ್ಧಿ ಶಕ್ತಿಯ ನೆಲೆ. ಶಿರಸ್ಸು

ತಲೆಚಿಪ್ಪು

(ವೈ) ಕಿವಿಗಳು, ಕಣ್ಣು ಹಾಗೂ ಹೆಡತಲೆಯ ಉಬ್ಬಿನ ಮೇಲೆ ತಲೆಬುರುಡೆಯ ಗುಮ್ಮಟಾಕಾರದ ಭಾಗ. ತಲೆ ಬುರುಡೆಯ ಓಡು. ಮುಖಭಾಗ, ಕೆಳದವಡೆ ಇರದ ತಲೆಬುರುಡೆ

ತಲೆಬರಹ

(ಸಾ) ೧. ಪ್ರಬಂಧಗಳು, ಪ್ರಕರಣಗಳು ಮೊದಲಾದವುಗಳ ಶಿರೋನಾಮೆ, ಶೀರ್ಷಿಕೆ. ೨. ಚಲಚ್ಚಿತ್ರ, ದೂರದರ್ಶನ, ವ್ಯಂಗ್ಯಚಿತ್ರ ಇತ್ಯಾದಿಗಳಲ್ಲಿ ವಿವರಣೆಯ ಬರಹ. ೩. ದಸ್ತಾವೇಜಿನ ಪ್ರಮಾಣ ಲೇಖ

Search Dictionaries

Loading Results

Follow Us :   
  Download Bharatavani App
  Bharatavani Windows App