भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತೂಗು ಸೇತುವೆ

(ತಂ) ತಳದಲ್ಲಿ ಕಮಾನು/ ಕಂಬಗಳ ಆಧಾರವಿಲ್ಲದೆ ಎರಡು ಕೊನೆಗಳಲ್ಲೂ ದೃಢಸ್ತಂಭಗಳಿಗೆ ಬಿಗಿದು ಕಟ್ಟಿ ಹೊಳೆಗಳಿಗೆ ಅಡ್ಡ ವಾಗಿ ತಂತಿ ಹೊರಜಿ ಗಳಿಂದ ಜೋಲು ಹಾಕಿರುವ ಸೇತುವೆ. ಚಿತ್ರದಲ್ಲಿ ಬೆಂಗಳೂರಿನಲ್ಲಿನ ತೂಗು ಸೇತುವೆ

ತೂಬು

(ತಂ) ಜಲಾಶಯದಲ್ಲಿ ನೀರಿನ ಒಳಹರಿವನ್ನು ಅಥವಾ ಹೊರ ಹರಿವನ್ನು ಹತೋಟಿಯಲ್ಲಿಡುವುದರ ಮೂಲಕ ನೀರಿನ ಮಟ್ಟವನ್ನು ಬದಲಾಯಿಸಲು ಅನುಕೂಲಿಸುವ ಜಾರು ಬಾಗಿಲು ಅಥವಾ ಇತರ ಸಾಧನ

ತೂರು ನಳಿಕೆ

(ವೈ) ರಕ್ತನಾಳಗಳ/ಅವಯವಗಳ ಒಳಕ್ಕೆ ಹೊಗಿಸಲು ಬಳಸುವ ದೃಢವಾದ/ನಮ್ಯವಾದ ನಾಳ. ದ್ರವ ಮುಂತಾದವನ್ನು ಒಳಸೇರಿಸಲು/ಹೊರತೆಗೆಯಲು ಬಳಕೆ

ತೂರು ಯಂತ್ರ

(ತಂ) ಪದಾರ್ಥಗಳನ್ನು ಕೇರಿ ಜಳ್ಳನ್ನು ತೂರಿ ಗಟ್ಟಿಯನ್ನು ಸಂಗ್ರಹಿಸುವ ಸಾಧನ

ತೂಲಿಯಮ್

(ರ) ಮೃದುವಾದ ಬೂದು ಬಣ್ಣದ ವಿರಳ ಲೋಹ ಧಾತು. ಪ್ರತೀಕ Tm. ಲ್ಯಾಂತನೈಡ್ ಗುಂಪಿಗೆ ಸೇರಿದುದು. ಪಸಂ ೬೯; ಸಾಪರಾ ೧೬೮.೯೩೪; ಸಾಸಾಂ. ೯.೩೨೧ (೨೦0 ಸೆ);

ತೃಣಮಣಿ

(ಭೂವಿ) ಅಂಬರ. ನೋಡಿ: ಶಿಲಾರಾಳ

ತೃತೀಯಕ ಆಲ್ಕಹಾಲ್

(ರ) ಆಲ್ಕಹಾಲ್‌ನಲ್ಲಿ ಮೂರು ಬಗೆ : ಪ್ರಾಥಮಿಕ (ಮೀಥೆನಾಲ್), ದ್ವಿತೀಯಕ ಮತ್ತು ತೃತೀಯಕ. ಪ್ರತಿಯೊಂದರಲ್ಲೂ ಕಾರ್ಬನ್ ಪರಮಾಣುವಿಗೆ -OH ಗುಂಪು ಲಗತ್ತಾಗಿರುತ್ತದೆ. ಪ್ರಾಥಮಿಕದಲ್ಲಿಯ ಹೈಡ್ರೊಜನ್ ಪರಮಾಣುಗಳ ಮೂರು ಸ್ಥಾನಗಳಲ್ಲಿ ಆಲ್ಕೈಲ್‌ಗಳನ್ನು ಪ್ರತಿ ಸ್ಥಾಪಿಸಿದಾಗ (ತ್ರಿಪ್ರತಿ ಸ್ಥಾಪನೆ) ತೃತೀಯಕ ಆಲ್ಕಹಾಲ್ ದೊರೆಯುತ್ತದೆ. ರಾಸಾಯನಿಕ ಸೂತ್ರ (CH3)3COH

ತೆಂಗಿನನಾರು

(ಸ) ಹಗ್ಗ, ಚಾಪೆ ಮೊದಲಾದವನ್ನು ತಯಾರಿಸಲು ಬಳಸುವ ನಾರು. ಹುರಿ, ಕದವೆ

ತೆಂಗಿನೆಣ್ಣೆ

(ಸ) ತೆಂಗಿನಕಾಯಿಯ ತಿರುಳನ್ನು ಒಣಗಿಸಿ (ಕೊಬ್ಬರಿ) ಗಾಣದಲ್ಲಿ ಅರೆದಾಗ ದೊರೆಯುವ ಎಣ್ಣೆ; ದ್ರಬಿಂ ೨೦0-೨೮0 ಸೆ ಸಾಸಾಂ. ೦.೯೧೨. ಕೊಬ್ಬರಿ ಎಣ್ಣೆ

ತೆಂಗು/ತೆಂಗಿನ ಮರ

(ಸ) ಅರಿಕೇಸೀ (ಪಾಮೀ) ಕುಟುಂಬಕ್ಕೆ ಸೇರಿದ ಅತ್ಯಂತ ಪ್ರಾಚೀನ ಹಾಗೂ ಬಲು ಉಪಯುಕ್ತ ಉಷ್ಣವಲಯ ಬೆಳೆ. ಕೊಕೋಸ್ ನ್ಯೂಸಿಫರ ವೈಜ್ಞಾನಿಕ ನಾಮ. ಭಾರತ, ಮಲಯ, ಆಗ್ನೇಯ ಏಷ್ಯ, ದಕ್ಷಿಣ ಅಮೆರಿಕಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ತೆಂಗಿನ ಮರದ ಪ್ರತಿಯೊಂದು ಭಾಗವೂ ಒಂದಿಲ್ಲೊಂದು ರೀತಿಯಲ್ಲಿ ಉಪಯುಕ್ತ. ಕೈಗಾರಿಕೆ ವ್ಯಾಪಾರಗಳಲ್ಲಿ ಲಕ್ಷಾಂತರ ಜನರಿಗೆ ಜೀವನಾಧಾರ. ಇದನ್ನು ಕಲ್ಪವೃಕ್ಷ ಎಂದು ಕರೆಯುವುದುಂಟು. ಇದು ೭೦-೮೦ ವರ್ಷ ಬದುಕಿ ಫಲ ಕೊಡುವ ಒಂಟಿ ಕಾಂಡದ ವೃಕ್ಷ. ಉದ್ದ ಜಾತಿ, ಗಿಡ್ಡ ಜಾತಿ ಎಂದು ಎರಡು ಬಗೆಗಳುಂಟು. ಪ್ರತಿವರ್ಷ ಸರಾಸರಿ ೧೯೯-೨೦೦ಕ್ಕೂ ಹೆಚ್ಚು ಕಾಯಿ ನೀಡುತ್ತದೆ. ತೆಂಗಿನಕಾಯಿ, ಎಳನೀರು, ಕೊಬ್ಬರಿ, ಕೊಬ್ಬರಿ ಎಣ್ಣೆ ದಿನನಿತ್ಯದ ಆಹಾರ ಪಾನೀಯಗಳಲ್ಲಿ ಬಳಕೆ

ತೆನಾರ್ಡೈಟ್

(ಭೂವಿ) ಆರ್ಥೊರಾಂಬಿಕ್ ವ್ಯವಸ್ಥೆಯಲ್ಲಿ ಸ್ಫಟಿಕೀಕರಣಗೊಳ್ಳುವ ಸೋಡಿಯಮ್ ಸಲ್ಫೇಟ್ ಖನಿಜ. Na2So4 ಕ್ಷಾರೀಯ ಸರೋವರಗಳಲ್ಲಿ ಲವಣಯುಕ್ತ ಶೇಷವಾಗಿ ಲಭ್ಯ

ತೆರಪು

(ಜೀ) ಕೋಶಗಳ ನಡುವಿನ ಖಾಲಿ ಜಾಗ. (ಪ್ರಾ) ಕೆಳವರ್ಗ ಪ್ರಾಣಿಯ ಊತಕಗಳಲ್ಲಿಯ ಖಾಲಿ ಸ್ಥಳಗಳಲ್ಲಿ ಒಂದು. ಇದು ಕಾಯದ ದ್ರವಗಳನ್ನು ಸಾಗಿಸುವ ನಾಳವಾಗಿ ಕಾರ್ಯನಿರ್ವಹಿಸುತ್ತದೆ. ಮೂಳೆಗಳಲ್ಲಿ ಎಲುಬು-ಕೋಶಗಳಿಂದ ತುಂಬಿದ ಅತ್ಯಂತ ಸಣ್ಣ ಕುಹರ. (ಸ) ಶಿಲಾವಲ್ಕದ ತ್ಯಾಲಸ್‌ನಲ್ಲಿಯ ಸಣ್ಣ ಕುಹರಗಳಲ್ಲೊಂದು

ತೆರಪು

(ಭೌ) ಪರಮಾಣು ಜಾಲಕದಲ್ಲಿ ಪರಮಾಣುಗಳ ಅಥವಾ ಪರಮಾಣು ಗುಂಪುಗಳ ನಡುವೆ ಇರುವ ಖಾಲಿ ಸ್ಥಳ

ತೆರಪು

(ತಂ) ಯಂತ್ರದಲ್ಲಿ ಚಲಿಸುವ ಎರಡು ಭಾಗಗಳು / ವಸ್ತುಗಳು ಹಾದುಹೋಗಲು ಇರುವ ಎಡೆ. ಖಾಲಿ ಜಾಗ. ಎಡೆ

ತೆರೆ

(ಭೌ) ೧. ಮೇಲ್ಮೈ ಕರ್ಷಣದಲ್ಲಿ ಏರುಪೇರಾದಾಗ ದ್ರವದ ಮೇಲ್ಮೈ ಮೇಲೆ ಮೂಡುವ ಸಣ್ಣ ಅಲೆಗಳ ತಂಡ. ೨. ವಿದ್ಯುತ್ ಪ್ರವಾಹದ ತೀವ್ರತೆಯಲ್ಲಿ ಬಂದು ಹೋಗುವ ಸಣ್ಣ ಬದಲಾವಣೆ. ದಡಕಿ

ತೆರೆದ ಕಲ್ಲುಗಣಿ

(ತಂ) ಭೂಮಿಯ ಮೇಲ್ಮೈ ಮೇಲೆ ಹಳ್ಳ ತೋಡಿ ಕಲ್ಲು, ಖನಿಜ ಇತ್ಯಾದಿಗಳನ್ನು ತೆಗೆಯುವ ಗಣಿ. ಕಲ್ಲನ್ನು ಎಬ್ಬಿಸಿ ತೆಗೆಯುವ ಗಣಿ

ತೆರೆದ ಕುಲುಮೆ ಪ್ರಕ್ರಿಯೆ

(ತಂ) ಉಕ್ಕು ತಯಾರಿಕೆಯ ಒಂದು ವಿಧಾನ. ಇದರಲ್ಲಿ ಬೀಡು ಕಬ್ಬಿಣ ಮತ್ತು ಉಕ್ಕಿನ ಚೂರುಗಳನ್ನು ಕಾವಿಟ್ಟಿಗೆಯ ಒಳಭಿತ್ತಿಯುಳ್ಳ ಕುಲುಮೆ ಯಲ್ಲಿರಿಸಿ ಮೊದಲೇ ಕಾಸಿದ ಅನಿಲಗಳ ಸಹಾಯದಿಂದ ಈ ಮಿಶ್ರಣವನ್ನು ಸುಮಾರು ೧೭೫೦0 ಸೆ.ಗೆ ಕಾಸಲಾಗುತ್ತದೆ. ೧೬೦೦0 ಸೆ ಉಷ್ಣತೆಯಲ್ಲಿ ಅನೇಕ ಕಲ್ಮಷಗಳು ತೇಲಿ ಕಿಟ್ಟ ರೂಪಕ್ಕೆ ಬರುತ್ತವೆ. ಉಳಿದುದಕ್ಕೆ ಕಬ್ಬಿಣದ ಅದಿರು ಅಥವಾ ಸುಣ್ಣಕಲ್ಲನ್ನು ಸೇರಿಸಿ ಸೌಟುಗಳಿಗೆ ಹರಿಸಲಾಗುತ್ತದೆ. ಅಲ್ಲಿ ಇದಕ್ಕೆ ಡಿಆಕ್ಸಿಡೀಕಾರಕ ಗಳಾಗಿ ಫೆರೊಸಿಲಿಕಾನ್, ಫೆರೊ ಮ್ಯಾಂಗನೀಸ್ ಅಥವಾ ಅಲ್ಯೂಮಿನಿಯಮ್‌ಅನ್ನು ಸೇರಿಸಲಾಗುತ್ತದೆ. ಈ ವಿಧಾನಕ್ಕೆ ಸೀಮನ್ಸ್-ಮಾರ್ಟಿನ್ ಪ್ರಕ್ರಿಯೆ (೧೮೬೬) ಎಂಬ ಹೆಸರೂ ಉಂಟು

ತೆರೆನೊರೆ

(ಭೂವಿ) ತೀರದ ಮೇಲೆ ಅಥವಾ ಬಂಡೆಗಳ ಮೇಲೆ ಅಲೆಗಳು ಬಡಿದು ಏಳುವ ನೊರೆ ಮತ್ತು ಕಲಕು

ತೆಷನೈಟ್

(ಭೂವಿ) ಕಣೀಯ ಮಧ್ಯಸ್ಥ ಅಗ್ನಿಶಿಲೆ. ಕ್ಯಾಲ್ಸಿಯಮ್‌ಯುಕ್ತ ಪ್ಲೇಜಿಯೋಕ್ಲೇಸ್, ಆಗೈಟ್, ಕೆಲವೊಮ್ಮೆ ಹಾರ್ನ್‌ಬ್ಲೆಂಡ್ ಖನಿಜಗಳಿಂದ ಕೂಡಿರುತ್ತದೆ

ತೆಳುಚರ್ಮ

(ಪ್ರಾ) ಕೆಲವು ಪ್ರೋಟೊಜೋವಗಳಲ್ಲಿರುವ ತೆಳುವಾದ ಹೊರಪೊರೆ

Search Dictionaries

Loading Results

Follow Us :   
  Download Bharatavani App
  Bharatavani Windows App