भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567892526Next >

ನಕಲು ಮಾಡುವಿಕೆ

(ಜೀ) ಡಿಎನ್‌ಎಯಿಂದ ಆರ್‌ಎನ್‌ಎಯ ಸಂಶ್ಲೇಷಣೆಯಾಗುವ ಕ್ರಿಯೆ. ಡಿಎನ್‌ಎ ಪಾಲಿಮರೇಸ್ ಎಂಬ ಕಿಣ್ವವು ಆರ್‌ಎನ್‌ಎಯ ಬಹ್ವಂಗೀಕರಣಕ್ಕೆ ಸಹಾಯಕ. ಡಿಎನ್‌ಎ ಮಾಹಿತಿಯಿಂದ ಪ್ರೊಟೀನ್ ಸಂಶ್ಲೇಷಣೆ ಯಾಗುವ ವಿಧಾನದಲ್ಲಿ ಆರ್‌ಎನ್‌ಎ ತಯಾರಿಕೆ ಅತ್ಯವಶ್ಯ ಘಟ್ಟ

ನಕ್ಷತ್ರ

(ಖ) ಸೂರ್ಯನಂಥ ಸ್ವಯಂ ಪ್ರಕಾಶಿತ ಖಗೋಳ ಕಾಯ. ಸ್ವಂತ ಗುರುತ್ವ ಕ್ಷೇತ್ರದ ಕಾರಣವಾಗಿ ಗೋಳ ರೂಪದಲ್ಲಿ ಗಿಡಿದುಕೊಂಡಿರುವ ಮತ್ತು ಗರ್ಭಸ್ಥ ಬೈಜಿಕ ಸಂಲಯನ ಕ್ರಿಯೆಗಳ ಕಾರಣವಾಗಿ ವಿಕಿರಣವನ್ನು ಉತ್ಪಾದಿಸಿ, ಉತ್ಪಾಟಿಸುವ ದ್ರವ್ಯದ ಬೃಹದ್ರಾಶಿ. ಯಾವುದೇ ಬೃಹದ್ರಾಶಿ ನಕ್ಷತ್ರವಾಗಬೇಕಾದರೆ ಅದರ ತಿರುಳಿನಲ್ಲಿ ಬೈಜಿಕ ಕ್ರಿಯೆಗಳು ಉದ್ಭವಿಸಬೇಕಾದುದು ಅಗತ್ಯ. ಇದಕ್ಕೆ ಅವಶ್ಯವಾಗುವ ಒತ್ತಡವನ್ನು ಮತ್ತು ಈ ಒತ್ತಡದ ಪರಿಣಾಮವಾಗಿ ಅಗಾಧ ಉಷ್ಣತೆಯನ್ನು ಸ್ವತಃ ಆ ರಾಶಿಯ ಸಾಂದ್ರತೆಯೇ ಒದಗಿಸುತ್ತದೆ. ನಕ್ಷತ್ರದ ಆದಿಮ ಹಂತದಲ್ಲಿ ಬೈಜಿಕ ಸಂಲಯನ ಕ್ರಿಯೆಗೆ ಇಂಧನ ಹೈಡ್ರೊಜನ್. ಇದು ಹೀಲಿಯಮ್ ಆಗಿ ದ್ರವ್ಯಾಂತರಿಸುತ್ತದೆ. ಆಗ ಸಂಭವಿಸುವ ದ್ರವ್ಯನಷ್ಟ, E=mc2 ಸಮೀಕರಣಾನುಸಾರ, ವಿದ್ಯುತ್ಕಾಂತ ವಿಕಿರಣವಾಗಿ (ಶಕ್ತಿ) ಉತ್ಸರ್ಜಿಸಲ್ಪಡುತ್ತದೆ. ಸೌರರಾಶಿಯ ೧/೨೦ ಅಂಶಕ್ಕಿಂತ ಕಡಿಮೆ ಇರುವ ಹಾಗೂ ೭೦ ಪಟ್ಟಿಗೂ ಹೆಚ್ಚು ಇರುವ ರಾಶಿ ನಕ್ಷತ್ರವಾಗದು. ನಕ್ಷತ್ರಗಳು ಬ್ರಹ್ಮಾಂಡದಲ್ಲಿ ಸಮಪ್ರಮಾಣಗಳಲ್ಲಿ ಹಂಚಿತವಾಗಿಲ್ಲ. ಆದರೆ ನಾನಾ ಆಕಾಶಗಂಗೆಗಳಲ್ಲಿ ಕೂಡಿಕೊಂಡಿವೆ

ನಕ್ಷತ್ರ ಪಟ

(ಖ) ನಕ್ಷತ್ರಗಳ ಸಾಪೇಕ್ಷ ಗೋಚರ ಸ್ಥಾನಗಳನ್ನು ಸೂಚಿಸುವ ಚಿತ್ರ

ನಕ್ಷತ್ರ ಪುಂಜಗಳು

(ಖ) ಅಕ್ಕಪಕ್ಕದ ಹಲವಾರು ತಾರೆಗಳು ವೀಕ್ಷಕನ ಮನಸ್ಸಿನಲ್ಲಿ ಬಿಂಬಿಸುವ ಶಾಶ್ವತ ಚಿತ್ರಗಳು. ಉದಾ : ಸಪ್ತರ್ಷಿ ಮಂಡಲ, ಮಹಾವ್ಯಾಧ, ವೃಶ್ಚಿಕ ಇತ್ಯಾದಿ. ಪುಂಜದಲ್ಲಿಯ ಬಿಡಿ ತಾರೆಗಳನ್ನು ಪೋಣಿಸಿರುವಂತೆ ಭಾಸವಾಗುವ ಎಳೆಗಳೆಲ್ಲವೂ ನಮ್ಮ ಕಲ್ಪನೆಯಷ್ಟೆ. ನಿರ್ದಿಷ್ಟ ಪ್ರದೇಶದ ಜನ ತಮಗೆ ಕಾಣುವ ಪುಂಜಗಳನ್ನು ಗುರುತಿಸಿ ಹೆಸರಿಸುತ್ತಾರೆ. ಎಲ್ಲ ಪುಂಜಗಳೂ ಎಲ್ಲ ಪ್ರದೇಶಗಳವರಿಗೂ ಕಾಣಲಾರವು. ಯಾವುದೋ ಒಂದು ಸ್ಥಳೀಯ ವಿದ್ಯಮಾನವನ್ನು ಪುಂಜದ ಅಥವಾ ಅದರಲ್ಲಿಯ ಕೆಲವು ಬಿಡಿ ತಾರೆಗಳ ಜೊತೆ ಹೊಂದಿಸಿ ಆ ಪುಂಜಕ್ಕೋ ತಾರೆಗಳಿಗೋ ನಾಮಕರಣ ಮಾಡುವುದು ವಿರಳವಲ್ಲ: ಅಂದರೆ ಈ ವಿದ್ಯಮಾನದ ‘ಕಾರಣ’ ಆ ಪುಂಜ ಅಥವಾ ನಕ್ಷತ್ರ. ವಿಲೋಮವಾಗಿ, ಆ ಪುಂಜ ಅಥವಾ ನಕ್ಷತ್ರದ ‘ಕಾರ್ಯ’ವಾಗಿ ಈ ವಿದ್ಯಮಾನ. ಇಂಥ ಕಾರ್ಯಕಾರಣ ಸಂಬಂಧ ಸ್ಥಾಪನೆಯಲ್ಲಿ ಕಲ್ಪನೆಯದೇ ಸಂಪೂರ್ಣ ಪಾತ್ರ. ಉದಾ: ‘ಸಿಂಹ’ ಮರಿ ಹಾಕುವ ಸ್ಥಿತಿಯಲ್ಲಿ ಸಂಜೆ ಮೂಡುತ್ತಿರುವ ಆಕರ್ಷಕ ಪುಂಜಕ್ಕೆ ‘ಸಿಂಹ’ ಎಂದೇ ಹೆಸರಿಸುವಲ್ಲಿ, ಜಡಿಮಳೆ ಧಾರಾಕಾರವಾಗಿ ಸುರಿಯುತ್ತ ಇರುವಾಗ ಸೂರ್ಯನ ನೆಲೆಗಳಾಗಿರುವ ತಾರೆಗಳಿಗೆ -ಮೃಗಶಿರಾ, ಆರ್ದ್ರಾ ಇತ್ಯಾದಿ – ಮಳೆ ನಕ್ಷತ್ರಗಳೆಂದು ಹೆಸರಿಸುವಲ್ಲಿ, ಈ ಮನೋಧರ್ಮ ಕಾಣುತ್ತೇವೆ. ವಸ್ತುತಃ ಇಂಥ ಯಾವ ಭೌತ ಸಂಬಂಧವೂ ಇಲ್ಲ. ನಕ್ಷತ್ರ ಮತ್ತು ನಕ್ಷತ್ರ ಪುಂಜ ನಾಮಗಳನ್ನು, ಕೇವಲ ಗುರುತು ಹಿಡಿಯುವ ಸಲುವಾಗಿ ನೀಡಲಾದ ಅಂಕಿತನಾಮ ಗಳೆಂದು ಪರಿಗಣಿಸಬೇಕು. ಎಂದೇ ‘ಸಪ್ತರ್ಷಿ ಮಂಡಲ’ದಲ್ಲಿ ಏಳು ಮಂದಿ ತಪಸ್ಸಿನಲ್ಲಿ ನಿರತರಾದ ಮುನಿಗಳನ್ನು ಪ್ರತಿಷ್ಠಾಪಿಸಲು ಅಥವಾ ಕಾಣಲು ಮಾಡುವ ಪ್ರಯತ್ನ ವ್ಯರ್ಥ. ನಿಜಕ್ಕೂ ಖಗೋಳವಿಲ್ಲ. ನಕ್ಷತ್ರಗಳು ಏಕತಲೀಯವಾಗಿಲ್ಲ, ಅವು ನಮ್ಮಿಂದ ಸಮದೂರಗಳಲ್ಲಿಲ್ಲ ಮತ್ತು ಅವುಗಳ ನಡುವೆ ಗಮನಾರ್ಹ ಭೌತ ಸಂಬಂಧವಿರಲೇಬೇಕೆಂದೇನೂ ಇಲ್ಲ. ಖಗೋಳವಾಗಲೀ ಅದರ ಒಳಮಾಳಿಗೆಗೆ ಲಗತ್ತಾಗಿರುವಂತೆ ಎಲ್ಲರಿಗೂ ಎಲ್ಲ ಕಾಲವೂ ಖಚಿತವಾಗಿಯೇ ಭಾಸವಾಗುವ ನಕ್ಷತ್ರಪುಂಜಗಳಾಗಲೀ ನೈಜವಲ್ಲ. ಬಿಡಿ ನಕ್ಷತ್ರಗಳ ಅತಿ ದೂರತ್ವ, ಯಾದೃಚ್ಛಿಕ ವಿತರಣೆ ಮತ್ತು ನಮ್ಮ ಕಣ್ಣುಗಳ ತೀರ ಸೀಮಿತ ಸಾಮರ್ಥ್ಯ ಬೆಸುಗೆಗೊಂಡುದರ ಫಲವಿದು. ಈ ಮಿಥ್ಯಾ ಚಿತ್ರಗಳು ಶತಮಾನಪರ್ಯಂತ ವ್ಯತ್ಯಯರಹಿತವಾಗಿ ಪ್ರಕಟವಾಗುವುದರಿಂದ ಮತ್ತು ಇವುಗಳ ಸಾಪೇಕ್ಷ ಸ್ಥಾನಗಳು ಸ್ಥಿರವಾಗಿ ಉಳಿಯುವುದರಿಂದ ಖಗೋಳದ ವಿವಿಧ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಇವು ಶಾಶ್ವತ ಗೋಳೀಯ ಪರದೆಯನ್ನು ಒದಗಿಸುತ್ತವೆ. ಅಂತರರಾಷ್ಟ್ರೀಯ ಸಾರಿಗೆ ಸಂಪರ್ಕ ಬೆಳೆದು ಆಕಾಶವಿಡೀ – ಅಂದರೆ ನಕ್ಷತ್ರಪುಂಜಗಳೆಲ್ಲವೂ – ವಿಜ್ಞಾನದ ಪರಿಧಿಯೊಳಗೆ ಬಂದಾಗ ಪುಂಜಗಳ ಹೆಸರು, ವ್ಯಾಪ್ತಿ, ವಿಸ್ತೀರ್ಣ ಮುಂತಾದವನ್ನು ನಿಖರವಾಗಿ ವ್ಯಾಖ್ಯಾನಿಸುವುದು ಅಗತ್ಯವಾಯಿತು. ಇಂಟರ್‌ನ್ಯಾಷನಲ್ ಅಸ್ಟ್ರನಾಮಿಕಲ್ ಯೂನಿಯನ್ ಇಂಥ ಒಂದು ಅಧಿಕೃತ ಖಗೋಳ ಪಟವನ್ನು ೧೯೩೩ರಲ್ಲಿ ಪ್ರಕಟಿಸಿತು. ಅದರ ಪ್ರಕಾರ ೮೮ ನಕ್ಷತ್ರಪುಂಜಗಳು ಅಡಕವಾಗಿ ಎರಕಗೊಂಡು ಖಗೋಳವನ್ನು ರೂಪಿಸಿವೆ. ಬಾನ ಮಾಳಿಗೆಗೆ ಹೊದಿಸಿರುವ ಚಿತ್ತಾರ ಬಿಲ್ಲೆಗಳಿವು. ಪ್ರತಿಯೊಂದು ಪುಂಜದ ಅಂತೆಯೇ ಹಲವಾರು ಪ್ರಮುಖ ನಕ್ಷತ್ರಗಳ ಸುತ್ತ ಸ್ಥಳೀಯ ಆಸೆ ಅಭೀಪ್ಸೆಗಳೂ ಸಾಹಿತ್ಯ ಸಂಸ್ಕೃತಿಗಳೂ ನಿಕಟವಾಗಿ ಹೆಣೆದುಕೊಂಡು ವಿಶಿಷ್ಟ ಪರಿವೇಶವನ್ನೇ ಸೃಷ್ಟಿಸಿವೆ. ಖಗೋಳವನ್ನು ನಕ್ಷತ್ರ ಚಿತ್ರಾಂಕಿತ ಪರದೆ ಎಂದು ಭಾವಿಸಿದರೆ ಸೂರ್ಯ, ಚಂದ್ರ ಮತ್ತು ಗ್ರಹಗಳನ್ನು ಇದರ ಮೇಲೆ ಸರಿಯುತ್ತಿರುವ ವಿವಿಧ ಕಾಯಗಳೆಂದು ಅಂಗೀಕರಿಸ ಬಹುದು. ಈ ಕಾಯಗಳ ಕಕ್ಷೆಗಳು ೧೮0 ಅಗಲದ ಇಕ್ಕಟ್ಟು ಪಟ್ಟಿಗೆ ಸೀಮಿತವಾಗಿವೆ. ಇದು ರಾಶಿಚಕ್ರ. (zodiac) ಇದು ನೇರ ೧೨ ಪುಂಜಗಳನ್ನು ಗುರುತಿಸಿದೆ. ಇವು ರಾಶಿಗಳು – ಮೇಷದಿಂದ ಮೀನದವರೆಗೆ, ಕಿನ್ನರ, ಕುಂತೀ, ತ್ರಿಶಂಕು, ಧನಿಷ್ಠಾ, ನಕುಲ, ಪಾರ್ಥ, ಮಹಾವ್ಯಾಧ, ಮಹಾಶ್ವಾನ, ಲಘುಸಪ್ತರ್ಷಿ, ವಿಜಯ ಸಾರಥಿ, ಸಪ್ತರ್ಷಿ ಮಂಡಲ, ಹಸ್ತಾಪುಂಜಗಳನ್ನೂ, ಧನು, ಮಿಥುನ, ಮೇಷ, ವೃಶ್ಚಿಕ, ವೃಷಭ, ಸಿಂಹ ರಾಶಿಗಳನ್ನೂ ಗುರುತಿಸುವುದು ಸುಲಭ. ಈ ಪ್ರಕಟಣೆಯ ಅನುಬಂಧ ೨ರಲ್ಲಿ ೮೮ ನಕ್ಷತ್ರಪುಂಜಗಳ ಬಗ್ಗೆ ಕೆಲವು ಮುಖ್ಯ ಮಾಹಿತಿಗಳನ್ನು ನೀಡಲಾಗಿದೆ.

ನಕ್ಷತ್ರ ವಿನ್ಯಾಸ

(ಭೌ) ಹೊರಕವಚದಿಂದ ಕೇಂದ್ರದತ್ತ ಸಾಗಿದಾಗ ಕಾಣುವ ನಕ್ಷತ್ರದ ಒತ್ತಡ, ಸಾಂದ್ರತೆ, ಉಷ್ಣತೆ ಮತ್ತು ಗುರುತ್ವದಲ್ಲಾಗುವ ಬದಲಾವಣೆಗಳನ್ನು ವಿವರಿಸುವ ಕ್ರಮ

ನಕ್ಷತ್ರಮೀನು

(ಪ್ರಾ) ಆಸ್ಟರಾಯ್ಡಿಯ ವರ್ಗಕ್ಕೆ ಸೇರಿದ ಹಲವಾರು ಬಗೆಯ ಸಾಗರವಾಸಿ ಕಂಟಕಚರ್ಮಿಗಳ ಸಾಮಾನ್ಯ ಹೆಸರು. ದೇಹದ ಮಧ್ಯಭಾಗ ಚಪ್ಪಟೆಯಾಗಿದ್ದು ಅದರಿಂದ ಸುತ್ತ ಕಿರಣಗಳಂತೆ ಐದು ಬಾಹುಗಳು ಹೊರಟು ಒಟ್ಟಿನಲ್ಲಿ ಮೀನು ನಕ್ಷತ್ರಾಕಾರದಲ್ಲಿ ಇರುವುದರಿಂದ ಈ ಹೆಸರು. ಸೈಲ್ಯೂರಿಯನ್ ಯುಗದ ಅನೇಕ ಪಳೆಯುಳಿಕೆ ಗಳಲ್ಲಿ ನಕ್ಷತ್ರಮೀನುಗಳ ಪಳೆಯುಳಿಕೆಗಳೂ ದೊರೆತಿವೆ

ನಕ್ಷತ್ರಯಾದಿ

(ಖ) ವ್ಯವಸ್ಥಾತ್ಮಕವಾಗಿ ಹಾಗೂ ನಿಷ್ಕೃಷ್ಟವಾಗಿ ಮಾಡಿದ ಖಗೋಳಕಾಯಗಳ ಪಟ್ಟಿಗೆ ನೀಡಲಾದ ಹೆಸರು. ಖಗೋಳದಲ್ಲಿ ನಕ್ಷತ್ರ ಸ್ಥಾನಗಳನ್ನು ಸಾಧಾರಣವಾಗಿ ಶುದ್ಧ ಆರೋಹಣ ಮತ್ತು ಕ್ರಾಂತಿ ಎಂಬ ನಿರ್ದೇಶಕಗಳಿಂದ ಸೂಚಿಸಲಾಗುತ್ತದೆ. ಈ ನಿರ್ದೇಶಕಗಳು ವಿಷುವದ್ವೃತ್ತವನ್ನೂ ಘಂಟಾವೃತ್ತಗಳನ್ನೂ ಆಧರಿಸಿವೆ

ನಕ್ಷತ್ರಸ್ಥಾನ ಸೂಚಕ

(ಖ) ಯಾವುದೇ ತಾರೀಖಿನ ಎಷ್ಟೇ ವೇಳೆಗೆ ಬೇಕಾದರೂ ಸೂರ್ಯನ ಮತ್ತು ಕೆಲವು ಉಜ್ಜ್ವಲ ನಕ್ಷತ್ರಗಳ ಸ್ಥಾನಗಳನ್ನು ಸೂಚಿಸುವ ಸಲುವಾಗಿ ಕ್ರಿಪೂ ಸುಮಾರು ೨೦೦ರಲ್ಲಿ ಬಳಕೆಗೆ ಬಂದ ಉಪಕರಣ. ಇದಕ್ಕೆ ದೃಷ್ಟಿ ಗುರಿಯನ್ನು ಅಳವಡಿಸಿದರೆ ಆಕಾಶಕಾಯಗಳ ಉನ್ನತಿಯನ್ನು ಕೂಡ ಅಳೆಯಬಹುದು. ಷಷ್ಟಕದ ಪೂರ್ವಜ, ತಾರೋನ್ನತಿ ಮಾಪಕ

ನಕ್ಷೆ

(ಗ) ಯಾವುದೇ ವಸ್ತು/ಕ್ಷೇತ್ರವನ್ನು ನಿರೂಪಿಸಲು, ವಿವಿಧ ಭಾಗಗಳ ನಡುವಿನ ಸಂಬಂಧವನ್ನು ಸೂಚಿಸಲು, ಪ್ರಮಾಣಗಳ/ಬಲಗಳ ಮೌಲ್ಯ ತೋರಿಸಲು, ರಚಿಸಿದ ಬಾಹ್ಯ ರೇಖಾಕೃತಿ ಇಲ್ಲವೇ ರೇಖೆಗಳ, ಬಿಂದುಗಳ ಹಾಗೂ ಆಕಾಶಗಳ (ಸ್ಪೇಸ್) ವಿನ್ಯಾಸ. ಯಾವುದೇ ಪ್ರಮೇಯವನ್ನು ಸಾಧಿಸಿ ತೋರಿಸಲು ರೇಖೆಗಳಿಂದ ರಚಿಸಿದ ಆಕೃತಿ. ರೇಖಾಚಿತ್ರ

ನಗೆ ಅನಿಲ

(ರ) ನೈಟ್ರಸ್ ಆಕ್ಸೈಡ್ (N2O) ವರ್ಣರಹಿತವಾದ ಸ್ವಲ್ಪಮಟ್ಟಿಗೆ ಸಿಹಿರುಚಿ ಇರುವ ಅನಿಲ. ಸಣ್ಣಪುಟ್ಟ ವೈದ್ಯಕೀಯ ಶಸ್ತ್ರಕ್ರಿಯೆಗಳಲ್ಲಿ ವಿಶೇಷವಾಗಿ ಹಲ್ಲು ಕೀಳುವಾಗ, ಅಲ್ಪಾವಧಿಯ ಅರಿವಳಿಕೆಯಾಗಿ ಬಳಕೆ. ಇದನ್ನು ಸೇವಿಸಿದಾಗ ವ್ಯಕ್ತಿಯಲ್ಲಿ ಮೊದಲು ನಗೆ ಪರಿಣಾಮ ಮೂಡುವುದರಿಂದ ಈ ಹೆಸರು. ಇದನ್ನು ಹಂಫ್ರೀ ಡೇವಿ (೧೭೭೮-೧೮೨೯) ೧೮೦೦ರಲ್ಲಿ ಆವಿಷ್ಕರಿಸಿದರು

ನಗ್ನ

(ಜೀ) ರಚನೆರಹಿತ ಅಥವಾ ಅಂಗರಹಿತ ಒಡಲು, ಚಿಪ್ಪು, ತುಪ್ಪಳ, ಎಲೆಗಳು, ಬೀಜಕೋಶ ಇತ್ಯಾದಿಗಳಂಥ ಆವರಣವಾಗಲೀ ಹೊರ ಬೆಳೆತಗಳಾಗಲೀ ಇರದ

ನಂಜಿನ ಕೊರಡು

(ಸ) ನೋಡಿ : ಕಾಸರ್ಕ

ನಂಜು

(ಜೀ) ನೋಡಿ: ಟಾಕ್ಸಿನ್

ನಡುಕ

(ವೈ) ಮಾನಸಿಕ ಕ್ಷೋಭೆ, ವೃದ್ಧಾಪ್ಯ ಅಥವಾ ನರ ಮಂಡಲದ ರೋಗದಿಂದಾಗಿ ಅನಪೇಕ್ಷಿತವಾಗಿ ಸ್ನಾಯುಗಳಲ್ಲಿ ಅಥವಾ ಕೈಕಾಲುಗಳಲ್ಲಿ ಉಂಟಾಗುವ ಕಂಪನ. ಅದುರು

ನಡುಕಡ್ಡಿ

(ಪ್ರಾ) ಗರಿಯಲ್ಲಿ ಕೂದಲಿನ ಆಧಾರವಾದ ದಿಂಡುಭಾಗ

ನಡುಕಾಂಡ

(ಸ) ಹತ್ತಿರ ಹತ್ತಿರ ಹೂವಿನ ಕಾವುಗಳಿರುವ ಕಾಂಡ

ನಡುಕಿವಿ

(ವೈ) ಉನ್ನತ ವರ್ಗದ ಕಶೇರುಕಗಳಲ್ಲಿ ಕಿವಿಯ ಮಧ್ಯಭಾಗ. ಇದರಲ್ಲಿ ಗಾಳಿ ತುಂಬಿರುತ್ತದೆ. ಇದು ಮೂರು ಕಿರು ಎಲುಬುಗಳಿಂದಲೂ ಗಂಟಲಿನಿಂದ ಬರುವ ಯೂಸ್ಟೇಕಿಯನ್ ನಳಿಗೆಯ ತೆರೆದ ಮೂತಿಯಿಂದಲೂ ಕೂಡಿದೆ. ಹೊರಕಿವಿಗೂ ನಡುಕಿವಿಗೂ ಮಧ್ಯೆ ಕಿವಿ ತಮಟೆಯ ಪೊರೆ (ಕರ್ಣಪಟಲ) ಮತ್ತು ಇದಕ್ಕೂ ಒಳಕಿವಿಗೂ ಮಧ್ಯೆ ಅಂಡ ಹಾಗೂ ವೃತ್ತಾಕಾರದ ಕಿಟಕಿಗಳು ಇವೆ. ಬಾಹ್ಯ ಕಿವಿಯ ಕಿವಿ ತಮಟೆಯ ಪೊರೆಯ ಚಲನೆಗಳು (ಧ್ವನಿ ಕಂಪನಗಳು) ನಡುಕಿವಿಯ ಕಿರು ಎಲುಬುಗಳ ಮೂಲಕ ಒಳಕಿವಿಗೆ ಸಾಗಿಹೋಗುತ್ತವೆ. ನೋಡಿ: ಕಿವಿ

ನಡುಗಡಲ ಮಡ್ಡಿ

(ಭೂವಿ) ಕಡಲಾಳದಲ್ಲಿ ಸಂಚಯನಗೊಂಡ ನಿಕ್ಷೇಪ

ನಡುನಿಲ್ಲೆಡೆ

(ಎಂ) ಮಹಡಿ ಮೆಟ್ಟಿಲು ಸಾಲುಗಳ ಮಧ್ಯೆ ಅಥವಾ ಕೊನೆಯಲ್ಲಿರುವ ಜಗಲಿ; ಹಂತಗಳನ್ನು ಹತ್ತುವಾಗ ಆಯಾಸ ಪರಿಹಾರಕ್ಕಾಗಿ ನಿಲ್ಲುವ ಜಾಗ

ನಡುವಣ ವಕ್ಷ ಸೀಳಿಕೆ

(ವೈ) ಎದೆಯ ಮುಂಭಾಗದಲ್ಲಿರುವ ಮೂಳೆ ವಕ್ಷಾಸ್ಥಿ. ಹೃದಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯಲ್ಲಿ ಈ ಮೂಳೆಯನ್ನು ಸೀಳಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ನಂತರ ಇದನ್ನು ಲೋಹ ತಂತಿಯಿಂದ ಒಗ್ಗೂಡಿಸುತ್ತಾರೆ
< previous1234567892526Next >

Search Dictionaries

Loading Results

Follow Us :   
  Download Bharatavani App
  Bharatavani Windows App