भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಲ್ಯಾಪಿಲ್ಲಸ್

(ಭೂವಿ) ಲಾವಾರಸ ಹೊರಹೊಮ್ಮಿದಾಗ ಜ್ವಾಲಾಮುಖಿ ಎರಚುವ ಸಣ್ಣ ಗುಂಡುಗುಂಡಾದ ಲಾವಾ ತುಣುಕು ಗಳು. ಸಿಡಿಗುಂಡುಗಳನ್ನು ಹೋಲುತ್ತವೆ, ಆದರೆ ಗಾತ್ರದಲ್ಲಿ ಚಿಕ್ಕವು : ೧ ರಿಂದ ೬೪ ಮಿಮೀ

ಲ್ಯಾಪ್‌ಟಾಪ್ ಕಂಪ್ಯೂಟರ್

(ಕಂ) ಸುಲಭವಾಗಿ ಒಯ್ಯಬಲ್ಲ, ತೊಡೆಯ ಮೇಲೆ ಇರಿಸಿಕೊಂಡು ಕೆಲಸ ಮಾಡಲು ಅನುಕೂಲವಿರುವ ಸಣ್ಣಗಾತ್ರದ ಕಂಪ್ಯೂಟರ್. ಅತಿ ಚಿಕ್ಕ ಕಂಪ್ಯೂಟರ್ – ನೋಟ್‌ಬುಕ್ ಕಂಪ್ಯೂಟರ್. ಸಾಧಾರಣ ಕಂಪ್ಯೂಟರ್‌ನಲ್ಲಿ ನಡೆಸಬಹುದಾದ ಎಲ್ಲ ಕ್ರಿಯೆಗಳನ್ನೂ ಇದರಲ್ಲಿ ನೆರವೇರಿಸಬಹುದು. ನೇರ ವಿದ್ಯುತ್ತಿನಿಂದ ಅಲ್ಲದೆ, ಬ್ಯಾಟರಿ ಚಾಲಿತವಾಗಿದ್ದು ಎಲ್ಲೆಂದರಲ್ಲಿ ಬಳಸಬಹುದು

ಲ್ಯಾಂಪ್ರೊಫೈರ್

(ಭೂವಿ) ಅಗ್ನಿಶಿಲೆಯ ಒಂದು ಬಗೆ. ಅಂತಃಸರಿತ ಶಿಲೆಯಾಗಿ ದೊರೆಯುತ್ತದೆ. ಬಯೊಟೈಟ್, ಹಾರ್ನ್‌ಬ್ಲೆಂಡ್ ಹಾಗೂ ಆಗೈಟ್‌ಗಳಂಥ ಸಿಲಿಕೇಟ್‌ಗಳು ಅತ್ಯಧಿಕ ಪ್ರಮಾಣಗಳಲ್ಲೂ ಫೆಲ್ಡ್‌ಸ್ಪಾರ್ ಅಲ್ಪ ಪ್ರಮಾಣದಲ್ಲೂ ಇರುತ್ತವೆ. ಕೆಲವು ಲ್ಯಾಂಪ್ರೊಫೈರ್‌ಗಳು ಫೆಲ್ಡ್‌ಸ್ಪಾರ್‌ನಿಂದ ಮುಕ್ತ

ಲ್ಯಾಂಬರ್ಟ್

(ಭೌ) ಯಾವುದೇ ಮೇಲ್ಮೈಯ ಉಜ್ಜ್ವಲತೆಯನ್ನು ಅಳೆಯಲು ಹಿಂದೆ ಬಳಸುತ್ತಿದ್ದ ಮಾನ.

ಲ್ಯಾಬಿರಿಂತಡಾಂಟ್

(ಪ್ರಾ) ತೊಡಕು ತೊಡಕಾದ ದಂತವಿನ್ಯಾಸವಿದ್ದ, ಈಗ ನಷ್ಟವಂಶಿಯಾಗಿರುವ ಭೂಜಲಚರಿ. ವಕ್ರದಂತಿ

ಲ್ಯಾಬಿರಿಂತ್

(ಪ್ರಾ) ಎಲುಬು ಮತ್ತು ಪೊರೆ ಇದ್ದು, ಕಾಲುವೆಗಳೂ ಕುಹರಗಳೂ ಇರುವ, ಒಳಗಿವಿಯ ಸಂಕೀರ್ಣ ರಚನೆ. ಒಳಗಿವಿ. ಅಂತರಕರ್ಣ

ಲ್ಯಾಬ್ರಡೊರೈಟ್

(ಭೂವಿ) ಪ್ರತ್ಯಾಮ್ಲೀಯ ಅಗ್ನಿಶಿಲೆಗಳಲ್ಲಿನ ಶೇ. ೫೦-೭೦ ಭಾಗ ಅನಾರ್ತೈಟ್ ಅಂಶವಿರುವ ಫೆಲ್ಡ್‌ಸ್ಪಾರ್ ಖನಿಜ; ವರ್ಣರಂಜನೆಗೆ ಹೆಸರಾದುದು

ಲ್ಯಾಮಿನೇಶನ್

(ತಂ) ೧. ಟ್ರಾನ್ಸ್‌ಫಾರ್ಮರ್ ಇಲ್ಲವೇ ಇತರ ಸಾಧನಗಳಲ್ಲಿ ಕಾಂತೀಯ ಮಂಡಲ ರೂಪಿಸುವಂತೆ ವಿಶಿಷ್ಟ ಆಕಾರದ ಅನೇಕ ಉಕ್ಕಿನ ತೆಳುಹಾಳೆಗಳನ್ನು ಒಂದರ ಮೇಲೊಂದನ್ನು ಪೇರಿಸುವುದು. ೨. ಶಾಖ ಹಾಗೂ ಒತ್ತಡಗಳಿಂದ ಬಂಧಿತವಾದ ಮುದ್ರಿತ ಹಾಳೆಯೊಂದರ ಮೇಲಿನ ರಕ್ಷಣಾತ್ಮಕ ಪ್ಲಾಸ್ಟಿಕ್ ಪೊರೆ. (ಭೂವಿ) ಜೇಡು ಮುಂತಾದ ಜಲಜಶಿಲೆಗಳಲ್ಲಿ ಒಂದು ಮಿಮೀ ಅಥವಾ ಅದಕ್ಕೂ ಕಡಿಮೆ ತೆಳುವಾದ ಸ್ತರ

ಲ್ಯಾಮ್ಡ ಬಿಂದು

(ಭೌ) ೧. ಹೀಲಿಯಮ್-೧ ವಿರಳಾನಿಲ ಧಾತು ಹೀಲಿಯಮ್-೨ ದ್ರವವಾಗಿ ಪರಿವರ್ತನೆ ಯಾಗುವ ಸಂಕ್ರಮಣ ಉಷ್ಣತಾ ಬಿಂದು (೨.೧೮೬ K).

ಲ್ಯೂಕೇಮಿಯ

(ವೈ) ರಕ್ತದ ಬಿಳಿಕಣಗಳ ಯಾವುದಾದರೊಂದು ಬಗೆ ಇತರ ರಕ್ತಕೋಶಗಳನ್ನು ನಿಗ್ರಹಿಸಿ ಅನಿರ್ಬಂಧಿತವಾಗಿ ಅಧಿಕವಾಗುತ್ತ ಹೋಗುವುದು ಮತ್ತು ಗುಲ್ಮ ಹಾಗೂ ಯಕೃತ್ತು ಮೊದಲಾದ ಅಂಗಗಳಿಗೂ ಪ್ರವೇಶಿಸುವುದು. ರಕ್ತಕೋಶಗಳನ್ನು ರೂಪಿಸುವ ಊತಕಗಳಿಗೆ ತಗಲುವ ಕ್ಯಾನ್ಸರ್ ರೋಗ. ಬಿಳಿ ನೆತ್ತರು ರೋಗ

ಲ್ಯೂಕೊಕ್ರಾಟಿಕ್

(ಭೂವಿ) ಅಗ್ನಿಶಿಲೆಗಳಲ್ಲಿ ನಸುಬಣ್ಣ ಸೂಚಿಸಲು ಬಳಸುವ ಪದ. ಫೆಲ್ಸಿಕ್ ಖನಿಜಗಳು ಅಧಿಕವಾಗಿ ಇರುವುದರಿಂದಲೂ ಗಾಢ ಮತ್ತು ಭಾರ ಸಿಲಿಕೇಟ್‌ಗಳು ಅಲ್ಪ ಪ್ರಮಾಣಗಳಲ್ಲಿರುವುದರಿಂದಲೂ ಅಗ್ನಿಶಿಲೆಗಳಲ್ಲಿ ಇಂಥ ನಸು ಬಣ್ಣ ಮೈದಳೆಯುತ್ತದೆ

ಲ್ಯೂಕೊಟಮಿ

(ವೈ) ಮಿದುಳಿನ ಮುಂಭಾಗದ ಹಾಲೆಗಳು ಮತ್ತು ನರಹೊರಡುವ ಸ್ಥಳ ಇವುಗಳ ನಡುವೆ ಇರುವ ತಂತು ಬಂಧವನ್ನು ಶಸ್ತ್ರಕ್ರಿಯೆಯಿಂದ ಛೇದಿಸುವುದು. ತೀವ್ರವಾದ ಷಿ(ಸ್ಕಿ)ಜೊಫ್ರೇನಿಯ ಮತ್ತು ಹುಚ್ಚು ಖಿನ್ನತೆಯನ್ನು ಶಮನ ಗೊಳಿಸಲು ಕೆಲವೊಮ್ಮೆ ಈ ಚಿಕಿತ್ಸೆ ಮಾಡಲಾಗುತ್ತಿತ್ತು. ಇಂಥ ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಪ್ರಸನ್ನತಾಭಾವ ಪಡೆದು ಉಲ್ಲಾಸಯುತನಾದರೂ ಅವನ ಕೆಲವೊಂದು ಉಚ್ಚ ಮಾನಸಿಕ ಶಕ್ತಿಗಳು ಲೋಪಗೊಳ್ಳುತ್ತವೆ. ಹಾಗಾಗಿ ಇಂತಹ ಶಸ್ತ್ರಚಿಕಿತ್ಸೆ ಈಗ ಹೆಚ್ಚು ಬಳಕೆಯಲ್ಲಿಲ್ಲ. ಮಿದುಳು ಶಸ್ತ್ರಚಿಕಿತ್ಸೆ

ಲ್ಯೂಕೊಸಂಯುಕ್ತ

(ರ) ಬಣ್ಣಗಳ ಅಪಕರ್ಷಣೆಯಿಂದ ರೂಪುಗೊಳ್ಳುವಂಥ ವರ್ಣರಹಿತವಾದ ಸಂಯುಕ್ತಗಳು. ಇವು ಉತ್ಕರ್ಷಣೆಗೊಂಡಾಗ ಮತ್ತೆ ಬಣ್ಣಗಳಾಗಿ ಪರಿವರ್ತನೆಗೊಳ್ಳುತ್ತವೆ

ಲ್ಯೂಪಸ್

(ವೈ) ಚರ್ಮದ ಮೇಲೆ ಹುಣ್ಣುಗಳಾಗುವ ಒಂದು ಬಗೆಯ ಚರ್ಮರೋಗ. ಚರ್ಮಕ್ಷಯ

ಲ್ಯೂಮೆನ್

(ಭೌ) ೧ ಕ್ಯಾಂಡೆಲಾ ತೀವ್ರತೆಯ ಏಕರೂಪ ಬಿಂದು ಆಕರ ಏಕಮಾನ ಘನಕೋನದಲ್ಲಿ (೧ ಸ್ಟೆರೆಡಿಯನ್) ೧ ಸೆಕೆಂಡಿಗೆ ಉತ್ಸರ್ಜಿಸುವ ಬೆಳಕಿನ ಪ್ರಮಾಣ. ಪ್ರತೀಕ lm. (ಸ) ವಿಶೇಷವಾಗಿ ಕೋಶದಲ್ಲಿ ಮೂಲ ದ್ರವ್ಯವಿಲ್ಲದಾಗ ಭಿತ್ತಿಗಳ ಒಳಗಿನ ಪ್ರದೇಶ. (ಪ್ರಾ) ನಾಳ ಅಥವಾ ನಾಳೀಯ ಆಕಾರದ ಅಂಗದ ಒಳಗಿನ ಪೊಳ್ಳು

ಲ್ಯೂಸಿನ್

(ರ) C6H13O2N. ಹಾಲಿನಂಥ ಪ್ರೋಟೀನ್ ಯುಕ್ತ ಪದಾರ್ಥಗಳ ಜಲವಿಭಜನೆಯಿಂದಾಗುವ ಅಮೀನೊ ಆಮ್ಲ. ಪ್ರತೀಕ Leu ನೋಡಿ: ಅಮೀನೊ ಆಮ್ಲಗಳು

Search Dictionaries

Loading Results

Follow Us :   
  Download Bharatavani App
  Bharatavani Windows App