भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಲಿಡೈಟ್

(ತಂ) ಸಾಮಾನ್ಯವಾಗಿ ಸಿಡಿಗುಂಡುಗಳಲ್ಲಿ ಉಪಯೋಗಿಸುವ ಪ್ರಧಾನವಾಗಿ ಪಿಕ್ರಿಕ್ ಆಮ್ಲದಿಂದ ತಯಾರಿಸಿದ ಅತ್ಯುಗ್ರ ಸಿಡಿಮದ್ದು

ಲಿತಾಗ್ರಫಿ

(ತಂ) ಸ್ಲೇಟ್‌ನಂಥ ಒಂದು ಬಗೆಯ ಹಳದಿ ಸುಣ್ಣದ ಶಿಲೆಯ ಮೇಲೆ ನಕ್ಷಾರೇಖೆಗಳನ್ನು ಅಥವಾ ಅಕ್ಷರಗಳನ್ನು ಒಂದು ಬಗೆಯ ಮಸಿಯಿಂದ ಬರೆದು, ಮಸಿ ಹಚ್ಚಿದ ಭಾಗ ಮಾತ್ರ ಮುದ್ರಿತವಾಗಿ, ಮಸಿಯಿಲ್ಲದ ಭಾಗ ಹಾಗೆಯೇ ಉಳಿಯುವಂತೆ, ನಕಲೆತ್ತುವ ವಿಧಾನ. ಕಲ್ಲಚ್ಚು ಕಲೆ

ಲಿತೊಡೋಮಸ್

(ಪ್ರಾ) ಶಿಲೆಯಲ್ಲಿ ಆಶ್ರಯ ಪಡೆದ ಜೀವಿ; ಶಿಲಾವಾಸಿ ಜೀವಿ

ಲಿಥಿಯಮ್

(ರ) ಮೃದುವಾದ ಬೆಳ್ಳಿ ಬಣ್ಣದ ಕ್ಷಾರೀಯ ಮೂಲಧಾತುಗಳಲ್ಲೊಂದು. ಆವರ್ತಕೋಷ್ಟಕದ ಮೊದಲ ಗುಂಪಿನ ಮೊದಲ ಸದಸ್ಯ. ಪ್ರತೀಕ Li. ಪಸಂ ೩, ಸಾಪರಾ ೬.೯೩೯, ಸಾಸಾಂ ೦.೫೩೪, ದ್ರಬಿಂ ೧೮೦.೫೪0 ಸೆ ಕುಬಿಂ ೧೩೪೦0ಸೆ. ಬಲು ಹಗುರ ಹಾಗೂ ಅತ್ಯಂತ ಕಡಿಮೆ ಸಾಂದ್ರತೆಯ ಲೋಹಧಾತು. ರಾಸಾಯನಿಕವಾಗಿ ಸೋಡಿಯಮ್‌ಅನ್ನು ಹೋಲುತ್ತದೆ, ಆದರೆ ಅದರಷ್ಟು ಕ್ರಿಯಾಶೀಲವಲ್ಲ. ಮಿಶ್ರಲೋಹಗಳ ಹಾಗೂ ಬ್ಯಾಟರಿಗಳ ತಯಾರಿಕೆಯಲ್ಲಿ ಬಳಕೆ

ಲಿನೊಲೀಯಿಕ್ ಆಮ್ಲ

(ರ) C17.H31.COOH ಅಪರ್ಯಾಪ್ತ ಕೊಬ್ಬಿನ ಆಮ್ಲ. ಕುಬಿಂ. ೨೨೯0ಸೆ. ಅಗಸೆ ಹಾಗೂ ಸೋಯಾಬೀನ್ಸ್ ಎಣ್ಣೆಯಲ್ಲಿ ಲಭ್ಯ. ‘ಒಣಗಿಸುವ’ ಗುಣದಿಂದಾಗಿ ಪೈಂಟ್ ಇತ್ಯಾದಿಗಳಲ್ಲಿ ಬಳಕೆ. ಹಿಂದೆ ಎಫ್ – ವೈಟಮಿನ್ ಎಂದು ಪರಿಚಿತ. ಅದಕ್ಕೆ ಅಂಥ ಪೋಷಕ ಗುಣವಿಲ್ಲವೆಂದೀಗ ಗೊತ್ತಾಗಿದೆ

ಲಿನ್‌ಸೀಡ್ ಎಣ್ಣೆ

(ಸ) ನೋಡಿ : ಅಗಸೆ ಎಣ್ಣೆ

ಲಿಪಿಡ್ಸ್

(ರ) ಜೀವಂತ ಊತಕಗಳಲ್ಲಿ ಅಡಕವಾಗಿರುವ ತೈಲ, ಕೊಬ್ಬು, ಮೇಣ, ಸ್ಟೀರಾಯ್ಡ್ ಮೊದಲಾದವು. ಇವು ನೀರಿನಲ್ಲಿ ಅದ್ರಾವ್ಯ, ಆದರೆ ಕ್ಲೋರೋಫಾರಮ್, ಬೆನ್ಝೀನ್ ಇತ್ಯಾದಿ ಆರ್ಗ್ಯಾನಿಕ್ ದ್ರಾವಕಗಳಲ್ಲಿ ದ್ರಾವ್ಯ. ತೈಲ, ಕೊಬ್ಬು ಆಹಾರ ಶಕ್ತಿ ಸಂಗ್ರಹಣೆಗೆ ಸಹಕಾರಿ. ಮೇಣವು ಶರೀರದ ಮೇಲ್ಮೈಗೆ ಜಲನಿರೋಧಕವಾಗಿ ನೆರವಾಗುತ್ತದೆ

ಲಿಪೇಮಿಯ

(ವೈ) ಶರೀರದ ರಕ್ತದಲ್ಲಿ ಅಧಿಕ ಪ್ರಮಾಣದ ಕೊಬ್ಬಿನ ಅಂಶವಿರುವ ಸ್ಥಿತಿ

ಲಿಬಿಡೊ

(ಮವೈ) ಸ್ತ್ರೀ ಪುರುಷರ ವರ್ತನೆಯ ಮೂಲದಲ್ಲಿ ಇರುವ ಚಾಲಕ ಬಲ. ಫ್ರಾಯ್ಡ್ ಪದ್ಧತಿಯಲ್ಲಿ ಕಾಮಪ್ರೇರಕ ಶಕ್ತಿ, ಇತರ ಲೇಖಕರ ಪದ್ಧತಿಗಳಲ್ಲಿ ಮಾನಸಿಕ ಪ್ರಚೋದನೆ: ಸುಪ್ತ ಮನಸ್ಸಿನ ಭಾಗವಾದ, ಆನುವಂಶಿಕ ಸಹಜ ಪ್ರವೃತ್ತಿಗಳ ಆಕರವಾದ, ‘ಇದ್’ನಿಂದ ಜನ್ಮ ತಾಳಿದ ಸಹಜ ಶಕ್ತಿಗಳು ಮತ್ತು ಆಸಕ್ತಿಗಳು

ಲಿಮಕಾನ್

(ಗ) ಧ್ರುವೀಯ ಸಮೀಕರಣ r = a cos c + b ಇರುವ ಸಮತಲ ವಕ್ರರೇಖೆ

ಲಿಮೊನೈಟ್

(ರ) ಕಬ್ಬಿಣದ ಒಂದು ಖನಿಜ. Fe2O3.H2O. ಇದು FeCO3 ಮತ್ತು Fe3O4 ಮೇಲೆ ನೈಸರ್ಗಿಕ ಪ್ರಕ್ರಿಯೆಗಳು ವರ್ತಿಸುವುದರ ಫಲವಾಗಿ ಮೈದಳೆಯುತ್ತದೆ. ವಿವಿಧ ರೂಪಗಳನ್ನು ತಳೆಯುತ್ತದೆ. ಸಾಧಾರಣವಾಗಿ ಕಪ್ಪು ಕಂದು ಅಥವಾ ಹಳದಿ ಬಣ್ಣದ್ದು

ಲಿಮ್ನಾಲಜಿ

(ಪವಿ) ಸರೋವರ, ಕೊಳ ಹಾಗೂ ತೊರೆ ಮುಂತಾದ ಸಿಹಿನೀರಿನ ಆಕರಗಳ ವೈಜ್ಞಾನಿಕ ಅಧ್ಯಯನ. ಈ ವೈಜ್ಞಾನಿಕ ಅಧ್ಯಯನದಲ್ಲಿ ಈ ಆಕರಗಳಲ್ಲಿ ಜೀವಿಸುವ ಜೀವಿಗಳ ಮತ್ತು ಸಸ್ಯಗಳ ಜೈವಿಕ, ರಾಸಾಯನಿಕ, ಭೌತಿಕ ಗುಣಲಕ್ಷಣಗಳನ್ನೂ ಅಭ್ಯಸಿಸಲಾಗುತ್ತದೆ

ಲಿಯಾನ

(ಸ) ಉಷ್ಣವಲಯದ ಕಾಡುಗಳಲ್ಲಿ ಇತರ ಮರಗಳ ಮೇಲೆ ಹಬ್ಬಿಕೊಳ್ಳುವ, ದಾರುಮಯವಾದ ಅನೇಕ ಬಗೆಯ ಬಳ್ಳಿ ಅಥವಾ ಲತೆಗಳಲ್ಲಿ ಒಂದು

ಲಿಯೊಂಟಿಯಾಸಿಸ್ ಆಸ್ಸಿಯ

(ವೈ) ಮುಖದ ಮೂಳೆಗಳ ಅಧಿಕ ಬೆಳವಣಿಗೆಯ ಕಾರಣ ಮುಖ ಸಿಂಹದಂತೆ ಕಾಣುವ ಅಪರೂಪದ ಅಸಹಜ ಸ್ಥಿತಿ. ಪ್ಯಾರಾಥೈರಾಯ್ಡ್‌ನ ಅತಿ ಚಟುವಟಿಕೆ, ಪೆಜೆಟ್ ರೋಗ ಹಾಗೂ ಇತರ ಕೆಲವು ಸ್ಥಿತಿಗಳಲ್ಲಿ ಇದು ಕಂಡುಬರಬಹುದು. ಸಿಂಹಮುಖಿ

ಲಿಯೊನಿಡ್‌ಗಳು

(ಖ) ಸಿಂಹರಾಶಿಯಿಂದ ಉಗಮಿಸುವಂತೆ ಭಾಸವಾಗುವ ಉಲ್ಕೆಗಳ ಸಮೂಹ. ಇವು ನವಂಬರ್ ೧೦ ಹಾಗೂ ೧೫ರ ನಡುವೆ ಗೋಚರಿಸುತ್ತವೆ

ಲಿಯೊಸಿಸ್ಟೋಸಿಸ್

(ಪ್ರಾ) ಕೀಟ ರೂಪಾಂತರದಲ್ಲಿ ಆಗುವಂತೆ ಊತಕದಲ್ಲಿ ಹೊರಗೆ ಸ್ರವಿಸಿದ ಕಿಣ್ವಗಳ ಕ್ರಿಯೆ ಯಿಂದಾಗಿ ಜರಗುವ ಊತಕ ವಿಭಜನೆ

ಲಿಲಿ

(ಸ) ಲಿಲಿಯೇಸೀ ಕುಟುಂಬಕ್ಕೆ ಸೇರಿದ ಲಿಲಿಯಮ್ ಜಾತಿಗೆ ಸೇರಿದ ಯಾವುದೇ ಗಿಡ ಅಥವಾ ಹೂ. ತೆಳು ಉದ್ದ ದಂಟಿನ ತುದಿಯಲ್ಲಿ ತುತ್ತೂರಿ ಆಕಾರದ ಬಿಳಿ ಕೆಂಪು ಅಥವಾ ಧೂಮ್ರ ಛಾಯೆಯ ಅಂದವಾದ ದೊಡ್ಡ ಹೂ ಬಿಡುವ ಗಡ್ಡೆ ಬೇರಿನ ಯಾವುದೇ ಸಸ್ಯ. ಮಡೋನಾ ಲಿಲಿ, ಟೈಗರ್ ಲಿಲಿ ಇದರ ಕೆಲವು ಪ್ರಭೇದಗಳು. ನೆಲ ನೈದಿಲೆ. ಸ್ಥಲ ಕುವಲಯ

ಲೀನವಾಗು

(ರ) ನೋಡಿ: ವಿಲೀನಿಸು

ಲೀಮರ್

(ಪ್ರಾ) ಪ್ರೈಮೇಟ್ ಗಣದ ಲೀಮರಿಡೀ ಕುಟುಂಬಕ್ಕೆ ಸೇರಿದ ವೃಕ್ಷವಾಸಿ ಪ್ರಾಣಿಗಳ ಸಾಮಾನ್ಯ ಹೆಸರು. ಮಡಗಾಸ್ಕರ್ ಮತ್ತು ಹತ್ತಿರದ ದ್ವೀಪಗಳ ನಿವಾಸಿಗಳು. ಉದ್ದ ಬಾಲ, ಮೃದು ತುಪ್ಪಳ, ದೊಡ್ಡ ಕಣ್ಣು ಇವುಗಳ ಮುಖ್ಯ ಲಕ್ಷಣ. ಕೆಲವು ನಿಶಾಚರಿಗಳು

ಲುಪ್ತ

(ಜೀ) ಹಿಂದಿನ ಹಂತಗಳಲ್ಲಿ ಇದ್ದುದಕ್ಕಿಂತ ಅಥವಾ ಅದೇ ಕುಲದ ಇತರ ಪ್ರಾಣಿಗಳಲ್ಲಿ ಇರುವುದಕ್ಕಿಂತ, ಕಡಿಮೆ ವಿಕಾಸವಾಗಿರುವ. ಹಳತಾಗಿ ಹೋದ

Search Dictionaries

Loading Results

Follow Us :   
  Download Bharatavani App
  Bharatavani Windows App