भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಲೇಶಧಾತು

(ರ) ೧. ಖನಿಜದಲ್ಲಿ ಅತ್ಯಲ್ಪ (ಶೇ. ೧ಕ್ಕೂ ಕಡಿಮೆ) ಪ್ರಮಾಣದಲ್ಲಿ ಕಂಡುಬರುವ ಅಪ್ರಧಾನ ಧಾತು. ೨. ಮಾನವ ದೇಹದಲ್ಲಿ ಅತಿಸೂಕ್ಷ್ಮ ಪ್ರಮಾಣದಲ್ಲಿ ಇರುವ ಲೋಹ ಮತ್ತು ಅಲೋಹ. ಇವು ಆಹಾರದ ಆವಶ್ಯಕ ಘಟಕಗಳು. ಆದರೆ ಇವುಗಳ ಆಧಿಕ್ಯ ದೇಹಕ್ಕೆ ಹಾನಿಕರ. ಉದಾ : ತಾಮ್ರ, ಫ್ಲೂರಿನ್, ಕ್ರೋಮಿಯಮ್ ಮತ್ತು ಸೆಲೆನಿಯಮ್

ಲೇಸರ್

(ಭೌ) Light Amplification by Stimulated Emission of Radiation ಪದಗಳ ಪ್ರಥಮಾಕ್ಷರಗಳಿಂದ ರಚಿತವಾದ ಪದ. ಅರ್ಥ: ವಿಕಿರಣದ ಉದ್ದೀಪಿತ ಉತ್ಸರ್ಜನೆ ಯಿಂದ ಬೆಳಕಿನ ಪ್ರವರ್ಧನೆ. ರೋಹಿತದ ಅತಿ ನೇರಿಳೆ, ಗೋಚರ ಅಥವಾ ಅವಕೆಂಪು ಪ್ರದೇಶ ದಲ್ಲಿ ಇರಬಹುದಾದ ತೀವ್ರ ಏಕವರ್ಣೀ ಬೆಳಕಿನ ಆಕರ ಇದು. ಇದರ ದೂಲ ಬೇರೆ ಯಾವುದೇ ಸಾಮಾನ್ಯವಾದ ರೀತಿಯಲ್ಲಿ ಉತ್ಪಾದಿಸಿದ ಬೆಳಕಿಗಿಂತ ಮಿಲಿಯಾಂತರ ಪಟ್ಟು ಹೆಚ್ಚು ಉಜ್ಜ್ವಲ ಹಾಗೂ ಸಂಸಕ್ತ. ಘನ, ದ್ರವ ಹಾಗೂ ಅನಿಲ ಪದಾರ್ಥಗಳನ್ನು ಲೇಸರ್- ಉತ್ಪಾದಕ ಮಾಧ್ಯಮಗಳಾಗಿ ಬಳಸಲಾಗುತ್ತದೆ. ೧೯೬೦ರಲ್ಲಿ ಆವಿಷ್ಕರಿಸಿದಂದಿನಿಂದ ಲೇಸರ್‌ಗಳನ್ನು ಬೆಸುಗೆ, ಶಸ್ತ್ರಚಿಕಿತ್ಸೆ, ಹಾಲೊಗ್ರಫಿ, ಮುದ್ರಣ, ದ್ಯುತಿ ಸಂವಹನ ಹಾಗೂ ಅಂಕಾತ್ಮಕ ಮಾಹಿತಿ ಓದುವಂಥ ನಾನಾ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ರಸಾಯನಶಾಸ್ತ್ರದಲ್ಲಿ ಲೇಸರ್‌ಗಳನ್ನು ದ್ಯುತಿರಾಸಾಯನಿಕ ಪ್ರತಿಕ್ರಿಯೆಗಳ ಅಧ್ಯಯನದಲ್ಲಿ ಹಾಗೂ ಅಣುಗಳ ರೋಹಿತ ದರ್ಶಕ ತನಿಖೆಗಳಲ್ಲಿ ಬಳಸಲಾಗುತ್ತಿದೆ

ಲೇಸರ್ ಮುದ್ರಕ

(ತಂ) ಕಂಪ್ಯೂಟರ್‌ನಲ್ಲಿನ ಅಕ್ಷರ, ಚಿಹ್ನೆ, ಚಿತ್ರ ಮುಂತಾದವನ್ನು ಲೇಸರ್ ಬಳಸಿ ಕಾಗದದ ಮೇಲೆ ಅಚ್ಚು ಮಾಡುವ ಯಂತ್ರ

ಲೈಕನ್

(ಸ) ನೋಡಿ : ಕಲ್ಲು ಹೂ

ಲೈಕೊಪೊಡಿಯಮ್

(ಸ) ಲೈಕೊಪೋಡ್ ಹಾವಸೆಯ ಬೀಜಾಣುಗಳ ನುಣ್ಣನೆಯ ಪುಡಿ. ಶಸ್ತ್ರಚಿಕಿತ್ಸೆಯಲ್ಲೂ ಬಾಣಬಿರುಸು ಗಳಲ್ಲಿಯೂ ದ್ರವ ಹೀರುವ ಪದಾರ್ಥವಾಗಿ ಬಳಕೆ. ವೃಕಪಾದಿ ಪುಡಿ

ಲೈಂಗಿಕ ಪ್ರಜನನ

(ವೈ) ಹೆಣ್ಣು ಹಾಗೂ ಗಂಡಿನ ಒಡಲಿನಲ್ಲಿರುವ ಲೈಂಗಿಕ ಜೀವಕೋಶಗಳಾದ ವೀರ್ಯಾಣು ಹಾಗೂ ಅಂಡಾಣುವನ್ನು ಯುಗ್ಮಕ ಎಂದು ಕರೆಯುವರು. ಹೆಣ್ಣು ಹಾಗೂ ಗಂಡಿನ ಯುಗ್ಮಕಗಳ ಮಿಲನದ ಫಲ “ಯುಗ್ಮಜ”. ಇದು ಪೂರ್ಣ ಬೆಳೆದು ಮಗುವನ್ನು ಸೃಜಿಸಬಲ್ಲುದು. ಯುಗ್ಮಕಗಳ ಮೂಲಕ ಸಂತಾನ ಮುಂದು ವರಿಯುವಿಕೆಯೇ ಲೈಂಗಿಕ ಪ್ರಜನನ

ಲೈಟ್‌ಹೌಸ್

(ತಂ) ನೋಡಿ : ಸಂಜ್ಞಾಜ್ಯೋತಿ

ಲೈನರ್

(ತಂ) ೧. ಅಂತರ್ದಹನ ಎಂಜಿನ್‌ನ ಸಿಲಿಂಡರ್‌ನಲ್ಲಿ ಉಜ್ಜುವ ಭಾಗಗಳಿಗೆ ಜೋಡಿಸಿದ ಪ್ರತ್ಯೇಕ ತೋಳು. ನವೀಕೃತ ಗೊಳ್ಳುವುದು ಮತ್ತು ಹೆಚ್ಚು ಬಾಳಿಕೆ ಬರುವ ಹೊರಮೈ ಒದಗಿಸುವುದು ಇದರ ಉದ್ದೇಶ. ಅಸ್ತರಿ. ೨. ಪ್ರಯಾಣಿಕರ ಸಂಚಾರಕ್ಕೆ ಉಪಯೋಗಿಸುವ, ನಿಯತ ಓಡಾಟದ ವ್ಯವಸ್ಥೆಗೆ ಸೇರಿದ ಪ್ರಯಾಣಿಕ ವಿಮಾನ/ಹಡಗು

ಲೈಪಾಯಿಡ್

(ರ) ಲಿಪಿಡ್‌ಗಳ ಮತ್ತೊಂದು ಹೆಸರು. ನೋಡಿ : ಲಿಪಿಡ್ಸ್

ಲೈಪೇಸ್

(ರ) ೧. ಕೊಬ್ಬು ಪದಾರ್ಥಗಳನ್ನು ವಿಭಜಿಸುವ ಕ್ರಿಯೆಯನ್ನು ಚುರುಕುಗೊಳಿಸುವ ಕಿಣ್ವ. ೨. ಲಿಪಿಡ್‌ಗಳಿಂದ ಹೈಡ್ರೊಕಾರ್ಬನ್ ಸರಪಳಿಗಳನ್ನು ವಿಚ್ಛೇದಿಸುವ ಕಿಣ್ವ

ಲೈಮೆನ್

(ವೈ) ಗೊತ್ತಾದ ಒಂದು ಪ್ರಚೋದನೆ ಇಂದ್ರಿಯ ಗ್ರಾಹ್ಯವಾಗಲು ಅಗತ್ಯವಾಗುವ ಅದರ ತೀಕ್ಷ್ಣತೆಯ ಕನಿಷ್ಠಮಟ್ಟ. ಸಂವೇದನೆ ಉಂಟುಮಾಡಲು ಬೇಕಾದ ನರಪ್ರಚೋದನೆಯ ಕನಿಷ್ಠ ಪ್ರಮಾಣ. ಪ್ರಚೋದನೆ ಇದಕ್ಕಿಂತ ಕೆಳಮಟ್ಟದಲ್ಲಿದ್ದರೆ ಯಾವ ಪ್ರತಿಕ್ರಿಯೆಯೂ ಆಗದು. ಸಂವೇದನ ಕನಿಷ್ಠ ಮಿತಿ

ಲೈರಾ

(ಪ್ರಾ) ಸ್ತನಿಗಳ ಮಿದುಳಿನಲ್ಲಿರುವ ಸಾಲ್ಟೀರಿಯಮ್. ವೀಣೆ ಆಕಾರದ ಯಾವುದೇ ರಚನೆ – ಮೂಳೆಯೊಂದರ ಮೇಲಿನ ವೀಣೆ ವಿನ್ಯಾಸದಂತೆ.

ಲೈರ್ ರೂಪಿ

(ಸ) ಪುರಾತನ ಗ್ರೀಕರ ಲೈರ್ ತಂತಿವಾದ್ಯದ ರೂಪವುಳ್ಳ ಎಲೆ. ಪಕ್ಕಗಳು ಕೆಳಗಿನಿಂದ ಮೇಲಿನವರೆಗೂ ವಂಕಿ ವಂಕಿಯಾಗಿ ಬಾಗಿ ಪುಟ್ಟ ಎದುರುಬದಿರು ಹಾಲೆಗಳನ್ನು ರೂಪಿಸಿದ್ದು, ಕೊನೆಗೆ ತುದಿಯಲ್ಲಿ ಇವೆಲ್ಲಕ್ಕಿಂತ ದೊಡ್ಡದಾದ ಹಾಲೆ ರೂಪುಗೊಂಡಿರುವ ಎಲೆ

ಲೈಸಿನ್

(ಪ್ರಾ) ರಕ್ತದಲ್ಲಿರುವ, ಕಾಯಿಲೆಯ ಪ್ರಕ್ರಿಯೆಯನ್ನು ಕ್ರಮೇಣ ಇಳಿಮುಖ ಮಾಡಬಲ್ಲ ಪ್ರತಿಕಾಯದಂಥ, ಪ್ರೋಟೀನ್

ಲೈಸೀನ್

(ರ) C6H14O2N2; ಸಾರತಃ ಪ್ರತ್ಯಾಮ್ಲೀಯ ಆಮೀನೊ ಆಮ್ಲ. ಜಲವಿಭಜನೆಯ ಮೂಲಕ ಅನೇಕ ಪ್ರೋಟೀನ್‌ಗಳಿಂದ ಲಭ್ಯ. ಪ್ರತೀಕ Lys. ಪ್ರಾಣಿಗಳ ಪೌಷ್ಟಿಕತೆಗೆ ಅತ್ಯಗತ್ಯವಾದ ಅಮೀನೊ ಆಮ್ಲ

ಲೈಸೆರ್ಜಿಕ್ ಆಮ್ಲ

(ರ) C15H15N2COOH. ಎರ್ಗಾಟ್‌ನಿಂದ ಲಭ್ಯವಾದ ಸ್ಫಟಿಕರೂಪಿ ಘನ. ಇದರ ಡೈಈಥೈಲ್ (ಎಲ್‌ಎಸ್‌ಡಿ) ಭ್ರಾಂತಿಜನಕ ಮದ್ದು. ಸೇವನೆ ಮಾರಕ

ಲೈಸೊಸೈಮ್

(ರ) ಮನುಷ್ಯರ ಕಣ್ಣೀರಿನಲ್ಲಿ, ಜೊಲ್ಲಿನಲ್ಲಿ ಮತ್ತು ಮೊಟ್ಟೆಯ ಬಿಳಿ ಭಾಗದಲ್ಲಿ ಕಂಡುಬರುವ, ಬ್ಯಾಕ್ಟೀರಿಯಗಳ ಭಿತ್ತಿಯನ್ನು ವಿಘಟಿಸಬಲ್ಲ ಮೂರು ಆಯಾಮಗಳ ರಚನೆ ಇರುವುದು ಗೊತ್ತಾದ, ಮೊದಲ ಕಿಣ್ವ

ಲೊಇಸ್

(ಭೂವಿ) ಮರುಭೂಮಿಗಳಲ್ಲಿ ಹುಟ್ಟಿ ಗಾಳಿಯಿಂದ ಸಾಗಿಸಲ್ಪಟ್ಟ, ಹಳದಿ ಛಾಯೆಯ ಅತಿಸೂಕ್ಷ್ಮ ಶಿಲಾಕಣಗಳ ಸಮೂಹ. ಪ್ರಧಾನವಾಗಿ ಕ್ಯಾಲ್ಸಿಯಮ್ ಮತ್ತು ಬೆಣಚಿನ ಕಣಗಳಿಂದ ಕೂಡಿರುತ್ತದೆ. ಇದು ಚೀಣಾ, ಪೂರ್ವ ಯೂರೊಪ್, ಉತ್ತರ ಹಾಗೂ ದಕ್ಷಿಣ ಅಮೆರಿಕಗಳ ವಿಶಾಲ ಪ್ರದೇಶಗಳಲ್ಲೂ ಗೋಬಿ ಮರುಭೂಮಿಯಲ್ಲೂ ಭಾರಿ ಪ್ರಮಾಣಗಳಲ್ಲಿ ದೊರೆಯುತ್ತದೆ. ಇದರಲ್ಲಿ ಪಳೆಯುಳಿಕೆಗಳು ಅತ್ಯುತ್ತಮವಾಗಿ ಸಂರಕ್ಷಿತವಾಗಿರುತ್ತವೆ. ಮರಳು ದಿಬ್ಬ

ಲೊಕಸ್ಟ್

(ಸ) ಫ್ಯಾಬೇಸೀ ಕುಟುಂಬಕ್ಕೆ ಸೇರಿದ, ವಾಣಿಜ್ಯ ಪ್ರಾಮುಖ್ಯವಿರುವ, ಕಪ್ಪು ಲೊಕಸ್ಟ್ (ರೊಬೀನಿಯ ಸೂಡೊ ಅಕಾಸಿಯ) ಹಾಗೂ ಜೇನು ಲೊಕಸ್ಟ್ (ಗ್ಲಾಡಿಟ್ಸಿಯ ಟ್ರಿಯ ಕಾಂತೋಸ್) ಎಂಬ ಎರಡು ಪ್ರಭೇದಗಳ ಮರಗಳಲ್ಲೊಂದು (ಪ್ರಾ) ನೋಡಿ : ಮಿಡತೆ

ಲೊಕ್ಸೊಡಾಂಟ್

(ಜೀ) ಹೆಚ್ಚು ಆಳವಿಲ್ಲದ ಕುಳಿಗಳಿರುವ ದವಡೆ ಹಲ್ಲು

Search Dictionaries

Loading Results

Follow Us :   
  Download Bharatavani App
  Bharatavani Windows App